ಗ್ರಾಮದಾನ-
	ಸರ್ವೋದಯ ಸಮಾಜದ ಸ್ಥಾಪನೆಗಾಗಿ ವಿನೋಬಾ ಭಾವೆಯವರು ಭಾರತದಲ್ಲಿ ಆರಂಭಿಸಿದ ಭೂದಾನ ಚಳುವಳಿಯ ವಿಕಾಸದ ಘಟ್ಟ. ಒಂದು ಗ್ರಾಮದ ಪ್ರತಿಯೊಬ್ಬರೂ ತಮ್ಮ ತಮ್ಮ ಭೂಹಿಡುವಳಿಯ ಮಾಲೀಕತ್ವದ ಹಕ್ಕನ್ನು ತ್ಯಜಿಸಿ, ಗ್ರಾಮದ ಭೂಸಂಪತ್ತನ್ನು ಗ್ರಾಮೀಕರಣ ಮಾಡುವ ಕ್ರಮ. ಅಹಿಂಸಾತ್ಮಕ ಕ್ರಾಂತಿಯ ಕಾರ್ಯವಿಧಾನ. ಭೂದಾನ ಚಳುವಳಿ ಆರಂಭವಾದ ಒಂದು ವರ್ಷದಲ್ಲಿ(1952) ಗ್ರಾಮದಾನ ಆರಂಭವಾಯಿತು. ಉತ್ತರ ಪ್ರದೇಶ ರಾಜ್ಯದ ಮಂಗರೋರ್ ಎಂಬುದು ಮೊಟ್ಟಮೊದಲಿಗೆ ದಾನವಾಗಿ ಬಂದ ಗ್ರಾಮ. ಅನಂತರ ಒಂದೆರಡು ವರ್ಷಗಳಾದ ಮೇಲೆ ಇತರ ರಾಜ್ಯಗಳಲ್ಲೂ ನೂರಾರು ಗ್ರಾಮಗಳು ದಾನವಾಗಿ ಬಂದುವು. ಒರಿಸ್ಸ ರಾಜ್ಯದಲ್ಲಿ ಎರಡುಮೂರು ಸಾವಿರ ಗ್ರಾಮಗಳು ದಾನವಾಗಿ ಕೊಡಲ್ಪಟ್ಟವು. ಹೀಗೆ ಭೂದಾನ - ಗ್ರಾಮದಾನ ಚಳುವಳಿಯ ಮೊದಲ ದಶಕದಲ್ಲಿ ಸುಮಾರು ಐದು ಸಾವಿರ ಗ್ರಾಮಗಳು ಭಾರತದಲ್ಲಿ ದಾನವಾಗಿ ದೊರೆತವು. 

	ಭೂದಾನಕ್ಕಿಂತ ವಿಶಿಷ್ಟವೂ ವ್ಯಾಪಕವೂ ಆದ್ದು ಗ್ರಾಮದಾನ. ಭೂದಾನದಲ್ಲಿ ಭೂಮಾಲೀಕ ಆಂಶಿಕದಾನ ಕೊಡುತ್ತಾನೆ. ಸಾಮಾನ್ಯವಾಗಿ ತನ್ನ ಒಡೆತನದಲ್ಲಿರುವ ಭೂಮಿಯ ಆರನೆಯ ಒಂದು ಭಾಗವನ್ನು ಆತ ಭೂದಾನವಾಗಿ ಕೊಡುತ್ತಾನೆ. ಹಾಗೆ ಕೊಡಲ್ಪಟ್ಟ ಭೂಮಿಯನ್ನು ಭೂಹೀನ ಕೃಷಿಕಾರ್ಮಿಕನಿಗೆ ಹಂಚತಕ್ಕದ್ದಾಗಿದೆ. ಆದರೆ ಗ್ರಾಮದಾನದಲ್ಲಿ ಗ್ರಾಮದಲ್ಲಿರುವ ಸಮಸ್ತರೂ ತಮ್ಮ ಎಲ್ಲ ಭೂಮಿಯನ್ನೂ ದಾನವಾಗಿ ಕೊಡುತ್ತಾರೆ. ಗ್ರಾಮದ ಪ್ರತಿಯೊಬ್ಬ ಮಾಲೀಕನೂ ತನ್ನ ಭೂ ಹಿಡುವಳಿಯ ಮಾಲೀಕತ್ವದ ಹಕ್ಕನ್ನು ತ್ಯಾಗ ಮಾಡುತ್ತಾನೆ. ಇಡೀ ಗ್ರಾಮಸಮುದಾಯದ ಸಲುವಾಗಿ ಈ ಸಮರ್ಪಣೆಯಾಗುತ್ತದೆ. ಅಂಥ ಗ್ರಾಮದಲ್ಲಿ ವೈಯಕ್ತಿಕ ಒಡೆತನ ಹೋಗಿ ಗ್ರಾಮಸಮುದಾಯದ ಒಡೆತನ ಉಂಟಾಗುತ್ತದೆ.

	ಗ್ರಾಮದಾನದ ಮೇಲೆ ಗ್ರಾಮದ ಭೂಮಿ ಮತ್ತು ಇತರ ಸಾಧನ ಸೌಲಭ್ಯಗಳನ್ನು ಯುಕ್ತವಾಗಿ ರೂಢಿಸಿಕೊಳ್ಳುವುದು ಗ್ರಾಮಸಮುದಾಯದ ಹೊಣೆಯಾಗುತ್ತದೆ. ಗ್ರಾಮದ ಎಲ್ಲ ಸಾಧನ ಸಂಪತ್ತನ್ನೂ ಇಡೀ ಗ್ರಾಮ ಸಮಾಜದ ಉನ್ನತಿಗಾಗಿ ಬಳಸಿಕೊಳ್ಳಲು ಗ್ರಾಮಸ್ಥರು ವ್ಯವಸ್ಥಿತವಾಗಿ ಉಪಕ್ರಮಿಸುತ್ತಾರೆ. ದಾನವಾದ ಪ್ರತಿ ಹಳ್ಳಿಯಲ್ಲೂ ಸ್ಥಳೀಯ ಸ್ಥಿತಿಗತಿಗಳಿಗನುಗುಣವಾಗಿ ಮತ್ತು ಅಲ್ಲಿಯ ಜನರ ಮನೋಭಿಪ್ರಾಯಕ್ಕೆ ಅನುಗುಣವಾಗಿ ಕೃಷಿ ವ್ಯವಸ್ಥೆ ಆಗುತ್ತದೆ. ಜನರೆಲ್ಲ ಇಷ್ಟಪಟ್ಟರೆ ಸಾಮೂಹಿಕ ಅಥವಾ ಸಹಕಾರಿ ಬೇಸಾಯವನ್ನವಲಂಬಿಸಬಹುದು. ಹಾಗಿಲ್ಲದೆ ಕೌಟುಂಬಿಕಬೇಸಾಯವನ್ನವಲಂಬಿಸುವುದಾದರೆ ಎಲ್ಲ ಕುಟುಂಬಗಳಿಗೂ ಪ್ರತಿಯೊಂದು ಕುಟುಂಬದ ಜನಸಂಖ್ಯೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಗ್ರಾಮದ ಭೂಮಿಯನ್ನು ಹಂಚಿಕೊಡಬಹುದು. ಭೂಮಾಲೀಕತ್ವ ಮಾತ್ರ ಗ್ರಾಮಸಮುದಾಯದಲ್ಲೇ ಉಳಿಯುತ್ತದೆ. ಪ್ರತಿ ಕುಟುಂಬವೂ ತನಗೆ ಕೊಡಲಾಗುವ ಭೂ ಹಿಡುವಳಿಯನ್ನು ಕೃಷಿ ಮಾಡಿ, ಗಳಿಸಿದ ಉತ್ಪಾದನೆಯನ್ನು ಭೋಗಿಸಬಹುದು. ಆದರೆ ಹಿಡುವಳಿಯನ್ನು ಮಾರಾಟ ಮಾಡುವ ಅಥವಾ ಇನ್ನಾವ ರೀತಿಯಲ್ಲಾದರೂ ಪರಭಾರೆ ಮಾಡುವ ಅವಕಾಶ ಇರುವುದಿಲ್ಲ. ವ್ಯವಸಾಯದ ಮತ್ತು ಇತರ ಉದ್ಯಮಗಳ ಪ್ರಗತಿಯ ಕಾರ್ಯದಲ್ಲಿ ಅಂಥ ಹಳ್ಳಿಯಲ್ಲಿ ಸಹಕಾರ ಸಂಸ್ಥೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಸಾಲದ ಪೂರೈಕೆ, ಮಾರಾಟ, ಇಂಥ ಎಲ್ಲ ಕಾರ್ಯಗಳೂ ಸಹಕಾರ ಸಂಸ್ಥೆಗಳಿಂದ ಆಗುತ್ತವೆ. ಗ್ರಾಮಸಮುದಾಯದ ಸರ್ವತೋಮುಖವಾದ ಪ್ರಗತಿಯನ್ನು ಸಾಧಿಸಲು ಗ್ರಾಮದ ಅನುದಿನದ ಆಡಳಿತವನ್ನು ನಿರ್ವಹಿಸಲೂ ಗ್ರಾಮಸಭೆ ಇರುತ್ತದೆ. ಗ್ರಾಮಸಭೆಯ ನಿರ್ಣಯಗಳೆಲ್ಲ ಆದಷ್ಟು ಸರ್ವಾನುಮತದಿಂದಾಗುತ್ತದೆ. ಸರ್ಕಾರದೊಡನೆ ಗ್ರಾಮದ ವ್ಯವಹಾರ ಗ್ರಾಮಸಭೆಯ ಮೂಲಕ ನಡೆಯುತ್ತದೆ. ಭೂಮಿಯ ವಿತರಣೆ ಮತ್ತು ಅಭಿವೃದ್ಧಿ, ವಿದ್ಯಾಭ್ಯಾಸ, ಗೃಹಕೈಗಾರಿಕೆಗಳ ಬೆಳವಣಿಗೆ, ಗ್ರಾಮನೈರ್ಮಲ್ಯ ಸಾಧನೆ, ಗ್ರಾಮಾಡಳಿತ - ಇವೆಲ್ಲ ಗ್ರಾಮಸಭೆಯ ಜವಾಬ್ದಾರಿಯಾಗುತ್ತವೆ.

	ಪರಸ್ಪರ ಪ್ರೇಮ, ಸಹಕಾರ, ಹಂಚಿಕೊಂಡು ಬಾಳಬೇಕೆಂಬ ಭಾವನೆ - ಇವೇ ಮುಂತಾದ ಕೌಟುಂಬಿಕ ಭಾವನೆಗಳನ್ನು ಗ್ರಾಮಸಮುದಾಯಕ್ಕೆ ವಿಸ್ತರಿಸಿ ಶಾಂತಿ, ಸಮತೆ ಹಾಗೂ ಸ್ವಾವಲಂಬನೆಯ ಆಧಾರದ ಮೇಲೆ ಗ್ರಾಮಸಮುದಾಯಗಳನ್ನು ನಿರ್ಮಿಸಿ, ತನ್ಮೂಲಕ ಸರ್ವೋದಯ ಸಮಾಜವನ್ನು ರೂಪಿಸುವುದೇ ಗ್ರಾಮದಾನ ಚಳುವಳಿಯ ಉದ್ದೇಶ.

	ಭಾರತದ ಗ್ರಾಮಸಮಾಜದ ಜಟಿಲವಾದ ಸಮಸ್ಯೆಗಳ ನಿವಾರಣೆಗೆ ಹಾಗೂ ಅದರ ಪುನರ್ರಚನೆಗೆ ಗ್ರಾಮದಾನ ಅಹಿಂಸಾತ್ಮಕ ಹಾಗೂ ಪ್ರಭಾವಯುತ ವಿಧಾನವೊಂದೆಂದು ಮನವರಿಕೆಯಾಗಿದೆ. 1957ರ ಸೆಪ್ಟಂಬರಿನಲ್ಲಿ ಮೈಸೂರಿನ ಬಳಿ ಇಲವಾಲದಲ್ಲಿ ಸೇರಿದ್ದ ಅಖಿಲ ಭಾರತ ರಾಜಕೀಯ ಪರಿಷತ್ತಿನಲ್ಲಿ ಗ್ರಾಮದಾನ ಚಳುವಳಿಗೆ ಸರ್ವಾನುಮತ ಬೆಂಬಲ ದೊರಕಿತು. ಪಂಚವಾರ್ಷಿಕ ಯೋಜನೆಯಲ್ಲಿ ಭೂದಾನ ಮತ್ತು ಗ್ರಾಮದಾನಗಳಿಗೆ ಮನ್ನಣೆ ಕೊಡಲಾಗಿದೆ. ಈ ಕಾರ್ಯಕ್ರಮಗಳಿಗೆ ಸೂಕ್ತ ನೆರವನ್ನು ನೀಡುವ ವ್ಯವಸ್ಥೆಯಿದೆ. ಸರ್ಕಾರದ ಸಮುದಾಯ ಅಭಿವೃದ್ದಿ ಯೋಜನೆ ಮತ್ತು ಗ್ರಾಮದಾನ ಚಳುವಳಿಗಳನ್ನು ಸಮನ್ವಯಗೊಳಿಸಿ ಗ್ರಾಮಭಾರತದ ಪುನರ್ನಿರ್ಮಾಣಕ್ಕೆ ಮಹಾ ಪ್ರಯತ್ನ ಮಾಡಲಾಗುತ್ತಿದೆ.					(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ